NALIKALI

Header Ads

ಶಾಲಾ ಆರಂಭದಲ್ಲೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಸಾಧ್ಯತೆ...

 


    ಬೆಂಗಳೂರು: ಮೇ 29 ರಿಂದ 2024-25 ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ. ಸರಕಾರಿ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿದ್ಯಾವಿಕಾಸ ಯೋಜನೆಯಡಿ 2024-25ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ, ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

      ಸಾಂಕೇತಿಕವಾಗಿ ವಿತರಣೆ

     ಮೇ 29 ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿದ್ದು, ಆರಂಭದ ದಿನ ಕೆಲವು ಮಕ್ಕಳಿಗೆ ಸಾಂಕೇತಿಕವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ. ಈ ಬಾರಿ ಚುನಾವಣೆ ಬಂದಿದ್ದರಿಂದ ಪಠ್ಯಪುಸ್ತಕ ಸಕಾಲಕ್ಕೆ ಸಿಗುವುದೋ ಇಲ್ಲವೋ ಎಂಬ ಅನುಮಾನ ಪೋಷಕರದ್ದಾಗಿತ್ತು. ಆದರೆ, ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಗೆ ಟೆಂಡರ್ ನೀಡಿದ್ದರಿಂದ ಸಮಸ್ಯೆ ಇಲ್ಲವಾಗಿದೆ.


    ಈಗಾಗಲೇ ಪಠ್ಯಪುಸ್ತಕ ಮುದ್ರಣವಾಗಿದ್ದು ಹಂತಹಂತವಾಗಿ ಜಿಲ್ಲಾ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.ಹಾಗೆಯೇ ಸಮವಸ್ತ್ರ ಕೂಡಾ ಸಕಾಲಕ್ಕೆ ಪೂರೈಸುತ್ತಿರುವುದರಿಂದ ಇವುಗಳು ಕೂಡಾ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸಲಾಗುತ್ತಿದೆ.


   2024-25ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕೆಳಕಂಡ ಸಂಸ್ಥೆಗಳ ಮೂಲಕ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆಗಳ  ಸರಬರಾಜು ಕಾರ್ಯಕ್ರಮವನ್ನು ಕೈಗೊಳ್ಳಲಾಗಿರುತ್ತದೆ.

    ಸರ್ಕಾರಿ ಶಾಲೆಗಳಲ್ಲಿನ 1 ರಿಂದ 10 ನೇ  ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ  ಎಲ್ಲಾ ಮಕ್ಕಳಿಗೆ ವಿವಿಧ ಪರಿಷ್ಕೃತ  ಅಳತೆಗಳಿಗನುಗುಣವಾಗಿ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು 46 ಲಕ್ಷ ಮಕ್ಕಳಿಗೆ ವಿತರಣೆ 158 ಕೋಟಿ ರೂ. ವೆಚ್ಚದಲ್ಲಿ ಸಮವಸ್ತ್ರ ಖರೀದಿಗೆ ಟೆಂಡರ್ ಅನ್ನು ಫೆಬ್ರವರಿ ತಿಂಗಳಲ್ಲೇ ಮುಗಿಸಿ 1 ರಿಂದ 10ನೇ ತರಗತಿಯ 46 ಲಕ್ಷ ಮಕ್ಕಳಿಗೆ ಸಮವಸ್ತ್ರ ಒದಗಿಸುವಂತೆ ಕಂಪನಿಗಳಿಗೆ ಕಾರ್ಯಾದೇಶವನ್ನು ನೀಡಿದೆ. ಆ ಪ್ರಕಾರವಾಗಿ ಟೆಂಡರ್‌ದಾರರು ಮೇ ಅಂತ್ಯದಲ್ಲಿ ಪೂರೈಕೆ ಪೂರ್ಣಗೊಳಿಸುವ ಕಾರ್ಯವಾಗುತ್ತಿದೆ.

    ಶೂ ಮತ್ತು ಸಾಕ್ಸ್

    ಇಲಾಖೆಯ ಮತ್ತೊಂದು ಯೋಜನೆ ಯಾಗಿರುವ ಶೂ ಮತ್ತು ಸಾಕ್ಸ್ ಶಾಲಾ ಪ್ರಾರಂಭದ ಅವಧಿಗೆ ಸಿಗುವುದಿಲ್ಲ. ಏಕೆಂದರೆ, ಇದನ್ನು ಎಸ್‌ಡಿಎಂಸಿ ಮೂಲಕ ನೀಡುವುದರಿಂದ ಇಲಾಖೆ ಇವರಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಆಗಸ್ಟ್‌ ತಿಂಗಳಲ್ಲಿ ಅನುದಾನ ದೊರೆಯುವ ಸಾಧ್ಯತೆ ಇದ್ದು ಅದೇ ಸಮಯದಲ್ಲಿ ಶೂ ಮತ್ತು ಸಾಕ್ಸ್ ಸಿಗುವ ಸಾಧ್ಯತೆಗಳಿವೆ.

    ಸಮವಸ್ತ್ರ ಬಟ್ಟೆಗಳನ್ನು ರಾಜ್ಯದಲ್ಲಿನ  ತಾಲ್ಲೂಕು ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಸರಬರಾಜು ಮಾಡಬೇಕು, ತಾಲ್ಲೂಕು ಮಟ್ಟದವರೆಗೆ ಸರಬರಾಜು ಮಾಡುವ ಸಾಗಾಣಿಕೆ ವೆಚ್ಚ ಸರಬರಾಜು ಸಂಸ್ಥೆಯದ್ದಾಗಿರುತ್ತದೆ. ತಾಲ್ಲೂಕುಗಳಿಂದ ಶಾಲೆಗಳಿಗೆ ಶಿಕ್ಷಣಾಧಿಕಾರಿಗಳು ಸಾಗಾಣಿಕೆ ಮಾಡಬೇಕಿದ್ದು, ಸದರಿ ಕ್ಷೇತ್ರ ಸಾಗಾಣಿಕಾ ವೆಚ್ಚವಾಗಿ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 20,000 ರೂ.ಬಿಡುಗಡೆ ಮಾಡಲಾಗುತ್ತದೆ.

    60 ಲಕ್ಷ ಮಕ್ಕಳಿಗೆ ಪಠ್ಯಪುಸ್ತಕ 

    283 ಕೋಟಿ ರೂ. ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಪಠ್ಯಪುಸ್ತಕ ಮುದ್ರಣ ಮತ್ತು ಪೂರೈಕೆ ಮಾಡುವಂತೆ ವಿವಿಧ ಕಂಪನಿಗಳಿಗೆ ಟೆಂಡರ್ ನೀಡಿದೆ. ಇಲ್ಲಿ ಸರಕಾರಿ ಶಾಲಾ ಮಕ್ಕಳ ಜತೆಗೆ ಅನುದಾನಿತ ಮತ್ತು ಖಾಸಗಿ ಶಾಲಾ ಮಕ್ಕಳು ಸೇರಿರುವುದರಿಂದ ಪಠ್ಯಪಸ್ತಕದ ಸಂಖ್ಯೆ ಹೆಚ್ಚಾಗಿದೆ.

WhatsApp Group Join Now
Telegram Group Join Now

Post a Comment

0 Comments