ಕನಕದಾಸರ ಜಯಂತಿ
ಶ್ರೀ ಕನಕದಾಸರು 15 - 16 ನೆಯ ಶತಮಾನದ ಜನಪ್ರಿಯರಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು, ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು.
ದಾಸ ಸಾಹಿತ್ಯಕ್ಕೆ ವೈಶಿಷ್ಟ ಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ ಕನಕದಾಸ. ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ ಸಂತರಾಗಿದ್ದಾರೆ . ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಮಾತಿದೆ..
ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿ ,ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆಯನ್ನು ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ , ಅಂದಿನ ಸಮಾಜದ ಸ್ಥಿತಿಗತಿಗಳನ್ನು ತಿದ್ದುವ ಪ್ರಯತ್ನ ಮಾಡಿರುವ ದಾಸರಿವರು.
ಕನಕದಾಸರ ಜನನ :
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬೀರಪ್ಪನಾಯಕ ಮತ್ತು ಬಚ್ಚಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಬೀರಪ್ಪನಾಯಕ ಮತ್ತು ಬಚ್ಚಮ್ಮರಿಗೆ ಸುಮಾರು ವರ್ಷಕಳೆದರೂ ಮಕ್ಕಳಾಗಿರಲಿಲ್ಲ. ತಿಮ್ಮಪ್ಪನ ಹರಕೆಗೆ ವರಪ್ರಸಾದವಾಗಿ ಜನಿಸಿದ ಮಗನಿಗೆ ತಿಮ್ಮಪ್ಪ ಎಂದೇ ನಾಮಕರಣ ಮಾಡಿದ್ದರು. ಹೀಗಾಗಿ ಇವರ ಮೊದಲ ಹೆಸರು ತಿಮ್ಮಪ್ಪ ನಾಯಕ ಎಂಬುದಿತ್ತು.
ಇವರು ಬಾಡ ಗ್ರಾಮದ ದಂಡನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಇವರ ಜಮೀನಿನಲ್ಲಿ ಬಂಗಾರದ ನಿಧಿಯು ದೊರೆಯಿತಂತೆ. ಆ ನಿಧಿಯನ್ನು (ಬಂಗಾರ = ಕನಕ) ದೇವಸ್ಥಾನದ ನಿರ್ಮಾಣಕ್ಕೆ ಬಳಸಿಕೊಂಡರಂತೆ ಹಾಗಾಗಿ ಇವರ ಹೆಸರು ತಿಮ್ಮಪ್ಪ ನಾಯಕ ಎಂಬುದರ ಬದಲಾಗಿ ಕನಕನಾಯಕ ಎಂದು, ದಾಸರಾದ ಮೇಲೆ ಕನಕದಾಸ ಎಂದು ಬದಲಾಯಿತು ಎಂಬ ಪ್ರತೀತಿಯನ್ನು ಕೇಳಬಹುದು.
ಕನಕದಾಸರ ಶಿಕ್ಷಣ :
ಪುರಂದರದಾಸರ ಸಮಕಾಲೀನರಾದ ವ್ಯಾಸರಾಯರು ಕನಕದಾಸರಿಗೆ ನವವೈಷ್ಣವ ಧರ್ಮಕ್ಕೆ ದೀಕ್ಷೆ ನೀಡಿದರು. ಅವರು ಕಾವ್ಯ ಮತ್ತು ಹಾಡುಗಳಲ್ಲಿ ಹರಿದಾಸ ಸಂಪ್ರದಾಯದ ಶ್ರೇಷ್ಠ ಪ್ರತಿಪಾದಕರಾಗಿದ್ದರು. ಕನಕದಾಸರು ಅಲೆದಾಡುವ ದಂಡನಾಯಕರಾಗಿದ್ದು ಹಲವಾರು ಸ್ಥಳಗಳನ್ನು ಭೇಟಿ ಮಾಡುತ್ತಿದ್ದರು.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರೂ ಹೌದು. ಕಾಗಿನೆಲೆಯ ಆದಿ ಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದವರು. ಕಾಗಿನೆಲೆ ಆದಿ ಕೇಶವರಾಯ ಎಂಬುದು ಇವರ ಕೀರ್ತನೆಗಳ ಅಂಕಿತನಾಮ. ಕನಕದಾಸರ ಇಷ್ಟದೇವರು ಶರೀ ಆದಿಕೇಶವ. ಹಾಗಾಗಿ ಬಾಡಕ್ಕೆ ಸಮೀಪವಾದ ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನವನ್ನು ನಿರ್ಮಿಸಿದರು.
ಕನಕದಾಸರ ಸಾಹಿತ್ಯ :
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಊಗಾಭೋಗಗಳ ಮೇಲೆ ಸಾಹಿತ್ಯಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಅವರು ರಚಿಸಿದಸಾವಿರಾರು ಕೀರ್ತನೆಗಳು ಕುಟುಂಬದಲ್ಲಿ ನ ಜಗಳಗಳು, ನಕಲಿ ಸ್ವಾಮಿಗಳು ಮತ್ತು ಗುರುಗಳು, ದುರಾಸೆಯ ಪುರುಷರು ಮತ್ತು ಮಹಿಳೆಯರು, ಜಾತಿ, ಅಸಮಾನತೆ, ಕುತಂತ್ರದ ವ್ಯಾಪಾರಿಗಳು ಮುಂತಾದವುಗಳನ್ನು ವಿವರಿಸಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ.ಇವರ 5 ಮುಖ್ಯ ಕೃತಿಗಳು ಇಲ್ಲಿವೆ.
1) ಮೋಹನ ತರಂಗಿಣಿ
2) ನಳಚರಿತ್ರೆ
3) ರಾಮಧಾನ್ಯ ಚರಿತೆ
4) ಹರಿಭಕ್ತಸಾರ
5) ನೃಸಿಂಹಸ್ತವ
ಉಡುಪಿಯ ದೇವಸ್ಥಾನದ ಬಗ್ಗೆ :
ಉಡುಪಿಯ ದೇವಸ್ಥಾನದ ಕುರಿತು ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಕನಕದಾಸರಿಗೆ ಪ್ರವೇಶ ದೊರೆಯದೆ ಹೋದಾಗ, ದೇವಸ್ಥಾನದ ಹಿಂದೆ ನಿಂತು ಹಾಡ ತೊಡಗಿದರಂತೆ. ಬಾಗಿಲನ್ನು ತೆರೆದು ಸೇವೆಯನ್ನು ಕೊಡುವ ಹರಿಯೇ ಎಂದು ಆಗ ದೇವಸ್ಥಾನದ ಹಿಂಭಾಗ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. ಈಗಲೂ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಹಿಂದೆಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನನ್ನು ಕಾಣಬಹುದಾಗಿದೆ. ಅಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು ಕನಕನ ಕಿಂಡಿ ಎಂದು ಕರೆಯಲಾಗಿದೆ.
0 Comments